ಗ್ರೀನ್‍ವುಡ್, ವಾಲ್ಟರ್ -
1903-. ಇಂಗ್ಲಿಷ್ ಕಾದಂಬರಿಕಾರ ಮತ್ತು ನಾಟಕಕಾರ. ಲ್ಯಾಂಕಷೈರಿನ ಸ್ಯಾಲ್‍ಫರ್ಡಿನಲ್ಲಿ ಬಡಕುಟುಂಬವೊಂದರಲ್ಲಿ ಜನಿಸಿದ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡುದರಿಂದ, ತನ್ನ ಹನ್ನೆರಡನೆಯ ವರ್ಷದಲ್ಲಿಯೇ ವ್ಯಾಸಂಗವನ್ನು ನಿಲ್ಲಿಸಿದ. ಕೆಲವು ವರ್ಷ ಗೌಳಿಗನಾಗಿಯೂ ಕಚೇರಿ, ಲಾಯ, ಗಡಂಗು, ಅಂಗಡಿಗಳಲ್ಲಿ ಕೆಲಸದ ಹುಡುಗನಾಗಿಯೂ ಮೋಟಾರು ಬಂಡಿಯ ಚಾಲಕನಾಗಿಯೂ ಕೆಲಸ ಮಾಡುತ್ತ ಸಾಕಷ್ಟು ಸಂಪಾದನೆಯಿಲ್ಲದೆ ಒದ್ದಾಡಿದ. ನಿರುದ್ಯೋಗಿಗಳಿಗೆಂದೇ ಸರ್ಕಾರ ನೀಡಿದ ಅಶನಾರ್ಥಕ್ಕೂ ಈತ ಕೈಯೊಡ್ಡಿದ್ದುಂಟು. ಇಷ್ಟು ತಾಪತ್ರಯಗಳಿದ್ದರೂ ಬಿಡುವಿನ ವೇಳೆಯಲ್ಲಿ ಓದಿ ಜ್ಞಾನಾರ್ಜನೆ ಮಾಡಿಕೊಂಡು ಸಾಹಿತ್ಯ ರಚನೆಯತ್ತ ಸಾಗಿದ.

	ಗ್ರೀನ್‍ವುಡ್ ತನ್ನ ಮೂವತ್ತನೆಯ ವರ್ಷದಲ್ಲಿ (1933) ಲವ್ ಆನ್ ದಿ ಡೋಲ್ ಎಂಬ ಕಾದಂಬರಿಯನ್ನು ಬರೆದ. ಮರುವರ್ಷವೇ ಅದನ್ನು ನಾಟಕಕ್ಕೆ ರೂಪಾಂತರಿಸಿದಾಗ, ಅದು ಪಾರ್ಲಿಮೆಂಟಿನಲ್ಲಿ ವಾದವಿವಾದಕ್ಕೆಡೆಮಾಡಿತು. ಇದರಿಂದಾಗಿ ಕೆಲವು ತನಿಖೆಗಳಿಗೂ ಸುಧಾರಣೆಗಳಿಗೂ ಅವಕಾಶವಾಯಿತಲ್ಲದೆ ಬರೆದವನಿಗೆ ಹಣವನ್ನೂ ಆತ್ಮಪ್ರತ್ಯಯವನ್ನೂ ಅದು ತಂದುಕೊಟ್ಟಿತು.

	ಅನಂತರ ಗ್ರೀನ್‍ವುಡ್ ಅದೇ ಧಾಟಿಯ ಹಲವು ಕಾದಂಬರಿಗಳನ್ನೂ ದಿ ಕ್ಲೆಫ್ಟ್‍ಸ್ಟಿಕ್ ಎಂಬ ಕಥಾಸಂಕಲವನ್ನೂ ದೇರ್ ವಾಸ್ ಎ ಟೈಮ್ ಎಂಬ ಆತ್ಮಕಥನವನ್ನೂ ಬರೆದ. ಆದರೆ ಇವು ಯಾವುವೂ ಮೊದಲ ಕೃತಿಯಷ್ಟು ಯಶಸ್ವಿಯಾಗಿಲ್ಲ. ಈತ ಶ್ರಮಜೀವಿಗಳ ಜೀವನಾನುಭವಗಳನ್ನೂ ಅತ್ಯಂತ ದರಿದ್ರರ ಮತ್ತು ನಿರುದ್ಯೋಗಿಗಳ ಬವಣೆಗಳನ್ನೂ ನಿರೂಪಿಸಿರುವುದರಿಂದ ಈತನ ಕಾದಂಬರಿಗಳು ಶಕ್ತಿಯುತವಾಗಿವೆ. ಆದರೆ ವ್ಯಕ್ತಿತ್ವನಿರೂಪಣೆ ಮತ್ತು ವಿವರಗಳ ಸ್ಫುಟವಾಗಿಲ್ಲದಿರುವುದರಿಂದ ಅವು ಸಾಕಷ್ಟು ಯಶಸ್ವಿಯಾಗಲಿಲ್ಲ.

	ದಿ ಟೈಮ್ ಈಸ್ ರೈಪ್ (1934), ಹಿಸ್ ವರ್‍ಷಿಪ್ ದಿ ಮೇಯರ್ (1934), ಸ್ಟ್ಯಾಂಡಿಂಗ್ ರೂಮ್ ಓನ್ಲಿ (1935), ದಿ ಸೀಕ್ರೆಟ್ ಕಿಂಗ್‍ಡಮ್ (1938), ಓನ್ಲಿ ಮಗ್ಸ್ ವರ್ಕ್ (1938), ಸಮ್‍ತಿಂಗ್ ಇನ್ ಮೈ ಹಾರ್ಟ್ (1944), ಹ್ವಾಟ್ ಎವ್ವೆರಿಬಾಡಿ ವಾಂಟ್ಸ್ (1953), ಡೌನ್ ಬೈ ದಿ ಸೀ (1956), ಸ್ಯಾಟರ್‍ಡೇ ನೈಟ್ ಅಟ್ ದಿ ಕ್ರೌನ್ (1954)-ಇವು ಈತನ ಕೆಲವು ಕಾದಂಬರಿಗಳು.

	ಮೈ ಸನ್ಸ್ ಮೈ ಸನ್ (1935), ಗಿವ್, ಅಸ್ ದಿಸ್ ಡೇ (1936), ಪ್ರ್ಯಾಕ್ಟೀಸ್ಡ್ ಹ್ಯಾಂಡ್ (1936), ಸೊ ಬ್ರೀಫ್ ದಿ ಸ್ಟ್ರಿಂಗ್ (1945), ದಿ ಕ್ಯೂರ್ ಫಾರ್ ಲವ್ (1945), ಟೂ ಕ್ಲೆವರ್ ಫಾರ್ ಲವ್ (1951), ದಿಸ್ ಈಸ್ ಯುವರ್ ವೈಫ್ (1964)-ಇವು ಈತನ ಕೆಲವು ನಾಟಕಗಳು.								(ಪಿ.ಎನ್.ಆರ್.)
(ಆರ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ